ನಕಲಿ ವೈದ್ಯಕೀಯ -
ವೈದ್ಯ ಕೌಶಲ ಗೊತ್ತಿರುವಂತೆ ನಟಿಸುವ ಅಥವಾ ವೈದ್ಯಕೀಯದಲ್ಲಿ ಪ್ರಾವೀಣ್ಯ ಇದೆ ಎಂದು ಹೇಳಿಕೊಳ್ಳುವುದು ಕಪಟ ವೈದ್ಯನ ಕಸಬು (ಕ್ವೇಕರಿ). ಛದ್ಮವೈದ್ಯಕೀಯ, ಕೈಕರಣಿಕೆ ಪರ್ಯಾಯ ಪದಗಳು. ಇದೊಂದು ಅಕ್ರಮ. ರಾಜ್ಯದ ನಿಯಮಾವಳಿ ಪ್ರಕಾರ ನಕಲಿ ವೈದ್ಯ ಶಿಕ್ಷಾರ್ಹನಾಗುತ್ತಾನೆ. ವೈದ್ಯಕೀಯ ವೃತ್ತಿಯನ್ನು ಅನುಸರಿಸುವಾತನಿಗೆ ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯವೊಂದರ ವೈದ್ಯ ಸ್ನಾತಕ ಪದವಿ ಅಥವಾ ಯೋಗ್ಯತಾ ಪತ್ರ ಇರಬೇಕು. ಅಲ್ಲದೇ ಭಾರತದ ಮೆಡಿಕಲ್ ಕೌನ್ಸಿಲ್‍ನ ಒಪ್ಪಿಗೆ ಪಡೆದು ತರುವಾಯ ಪ್ರಾದೇಶಿಕ ಮೆಡಿಕಲ್ ಕೌನ್ಸಿಲ್‍ನಲ್ಲಿ ಕಾನೂನಿನ ಪ್ರಕಾರ ದಾಖಲು ಮಾಡಿಕೊಳ್ಳಲೂ ಬೇಕು. ಅರ್ಹತೆ ಇಲ್ಲದ ಮತ್ತು ದಾಖಲಾಗದ ನೌಕರನನ್ನು ಆತ ತನ್ನ ಸಹಾಯಕನಾಗಿ ತೆಗೆದುಕೊಳ್ಳಬಾರದು. ಹಾಗೆ ತೆಗೆದುಕೊಂಡದ್ದಾದರೆ ಆ ವೈದ್ಯ, ಸ್ವತಃ ಅರ್ಹತೆ ಪಡೆದು ದಾಖಲಾದವನಾಗಿದ್ದರೂ ಮೋಸದ ಅಪರಾಧಕ್ಕೆ ಈಡಾಗುವನು ಮತ್ತು ಆ ಕಾರಣದಿಂದ ಕಾನೂನಿನ ಕ್ರಮಕ್ಕೆ ಒಳಗಾಗುವನು. ಅಷ್ಟೇ ಅಲ್ಲದೇ ಯೋಗ್ಯತೆ ಇಲ್ಲದವರಿಗೆ ಛದ್ಮವೈದ್ಯದಲ್ಲಿ ಸಹಾಯ ಮಾಡಿದರೆ ಹೆಸರುಳ್ಳ ಯೋಗ್ಯ ಪ್ರವೀಣ ವೈದ್ಯ ಬಾಂಧವರಿಗೆ ಅಪಕೀರ್ತಿ ತಟ್ಟಿ ಅವಮಾನ ಮಾಡಿದಂತಾಗುವುದು. ಇಂಥ ವೈದ್ಯನ ಹೆಸರನ್ನು ಭಾರತದ ಮೆಡಿಕಲ್ ಕೌನ್ಸಿಲ್‍ನ ವೈದ್ಯಕೀಯ ನೋಂದಣಿಯಿಂದ ಹೊಡೆದು ಹಾಕುವ ಪ್ರಮೇಯವೂ ಇದೆ.

ಕೈಕರಣಿಕೆಯನ್ನು ವೈದ್ಯದ ಹಲವು ವಿಭಾಗಗಳಲ್ಲಿ ಕಾಣಬಹುದು. ಮುಖ್ಯವಾಗಿ ಮೈಯಿಳಿಸುವುದರಲ್ಲಿ ಇದರ ಹಾವಳಿ ಅತಿಯಾಗಿದೆ. ಈ ದುಷ್ಕøತ್ಯದ ಉದ್ದೇಶವೇ ಅಪರಾಧಪೂರಿತವಾದದ್ದು. ಹುಡುಗಿಯರು, ಹೆಂಗಸರು, ಅವಿವಾಹಿತ ಅಥವಾ ವಿವಾಹಿತ ಸ್ತ್ರೀಯರು ತಿಳಿದೋ, ತಿಳಿಯದೆಯೋ ಕೆಟ್ಟ ಗಂಡಸರ ಹಿಡಿತಕ್ಕೆ ಸಿಕ್ಕಿ ಮೋಸ ಹೋಗಿ ಬಸುರಾಗುತ್ತಾರೆ. ಗುಟ್ಟು ರಟ್ಟಾಗದಿರುವುದಕ್ಕೆ ಕೈಕರಣಿಕೆಯಿಂದ ಮೈಯಿಳಿಸಬಲ್ಲ ಸಮಯಸಾಧಕರ ಕೈಗೆ ಸಿಕ್ಕು ಗರ್ಭಪಾತಕ್ಕೆ ಬಲಿಯಾಗುತ್ತಾರೆ. ಆ ನಕಲಿ ವೈದ್ಯರ ಪೂರ್ಣ ಅಶಾಸ್ತ್ರೀಯ ಹಾಗೂ ಅಪಾಯಕಾರೀ ವಿಧಾನಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡು ಇವರು ಅಪಾರ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಮೂವತ್ತು ದಾಟಿದ ಹೆಂಗಸಿನ ಗರ್ಭಕೋಶಕ್ಕೆ ಒಬ್ಬ ಗರ್ಭಪಾತ ಕೈರಣಿಕೆ ವೈದ್ಯ ಮನಸೋ ಇಚ್ಛೆ ಶಲ್ಯವನ್ನು ಪ್ರಯೋಗಿಸಿದ ಬಳಿಕ ಆಕೆ ಆಸ್ಪತ್ರೆಯಲ್ಲಿ ಮೂರು ದಿವಸ ನರಳಿ ಸತ್ತಳು ಎಂಬ ವರದಿಯನ್ನು ಟೇಲರ್ (1965) ಬರೆದಿದ್ದಾನೆ. ಒಂದೇ ರಾತ್ರಿಯಲ್ಲಿ ರೋಗ ಉಲ್ಬಣಿಸಿ ಮುಂಜಾನೆ ಮೈಯಿಳಿಯಿತು. ಮುಂದೆ ಜ್ವರವೇರಿ ಕೆಲವೇ ಗಂಟೆಗಳಲ್ಲಿ ಆಕೆ ಸತ್ತಳು. ಶವ ಪರೀಕ್ಷೆಯಲ್ಲಿ ಕೈಕರಣಿಕನ ಶಲ್ಯ ಗರ್ಭಕೋಶವನ್ನು ತೂತು ಮಾಡಿ ಉದರಾವರಣದ ಊತವನ್ನು ಉಂಟುಮಾಡಿದ್ದುದು ಕಂಡುಬಂದಿತು.

ಈ ಡೋಂಗೀ ವೈದ್ಯರನ್ನು ಗುರ್ತಿಸುವುದು ಹೇಗೆ ಎಂಬುದು ಮುಂದಿನ ಪ್ರಶ್ನೆ. ಅವರ ವ್ಯಾಪಾರ ಛಾಪುಗಳೇನಾದರೂ ಇವೆಯೆ ?  ಉತ್ತರ ಸುಲಭ ಅಲ್ಲ. ಅವರ ಚಿಕಿತ್ಸಾಸ್ಥಳ ಸಾಧಾರಣವಾಗಿ ಪಟ್ಟಣದ ಅತಿ ಕೊಳಕು ಮತ್ತು ಕತ್ತಲಾದ ಸ್ಥಳದಲ್ಲಿರುವುದು. ಅವರ ವಿಧಾನಗಳು ಅಶಾಸ್ತ್ರೀಯ ಮತ್ತು ಸೋಂಕು ತಗಲಿಸುವ ಅವೈಜ್ಞಾನಿಕ ರೀತಿಯವು. ಅವರ ಉದ್ದೇಶ ಅಮಾನುಷ ಮತ್ತು ಅವರ ಚಿಕಿತ್ಸಾಫಲ ಮೃತ್ಯು. ಜನ ಹಾಗೂ ಸರ್ಕಾರ ಸಹಕರಿಸಿ ವರ್ತಿಸಿದಾಗ ಮಾತ್ರ ಈ ಸಮಾಜಕಂಟಕರ ಕ್ರೌರ್ಯ ನಿರ್ಮೂಲವಾದೀತು.

ನಕಲಿ ವೈದ್ಯರು ಜಾಹೀರಾತುಗಳನ್ನು ಆಕರ್ಷಕ ರೀತಿಯಲ್ಲಿ ಪತ್ರಿಕೆಗಳಲ್ಲಿ ಪ್ರಕಟಿಸುತ್ತಾರೆ. ಲೈಂಗಿಕ ರೋಗಗಳ ಬಗ್ಗೆ ಹೆದರಿಕೆಯನ್ನುಂಟುಮಾಡುವ ಜಾಹೀರಾತುಗಳೇ ಹೆಚ್ಚು. ಅನಕ್ಷರಸ್ಥರ, ಯುವಪೀಳಿಗೆಯ ಸಹಜವಾದ ದೈಹಿಕ ಬದಲಾವಣೆ ಮತ್ತು ಕ್ರಿಯೆಗಳನ್ನು ಭಯಾನಕ ರೋಗಗಳೆಂದು ಬಣ್ಣ ಕಟ್ಟಿ ಹೇಳಿ ಅದಕ್ಕೆ ಚಿಕಿತ್ಸೆ ಕೊಡುತ್ತೇವೆಂದು ಅಮಾಯಕರ ಮೇಲೆ ಬಲೆಬೀಸಿ ಹಣವನ್ನು ಕೀಳುತ್ತಾರೆ.

ಭಾರತೀಯ ವೈದ್ಯ ಸಂಘ ಮತ್ತು ವೈದ್ಯ ಮಂಡಲಿಗಳು ಇಂತಹ ಜಾಹೀರಾತು ನೀಡುವವರ ಬಗ್ಗೆ ತಕ್ಕ ಕ್ರಮ ತೆಗೆದುಕೊಳ್ಳುವುದು ಅತ್ಯವಶ್ಯಕ.
	(ಸಿ.ಯು.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ